ಹರಿವು
ಡಬ್ಬಿಂಗ್
ಪೋಸ್ಟ್-ಪ್ರೊಡಕ್ಶನ್ ಹಂತ
ನಮ್ಮ ಸೃಜನಶೀಲ ಮತ್ತು ಪ್ರತಿಭಾವಂತ ತಂಡದ ನೆರವಿನೊಂದಿಗೆ, ನಿಮ್ಮ ಕಂಟೆಂಟ್ ಅನ್ನು ಸ್ಥಳೀಯ ಭಾಷೆಗೆ ಡಬ್ಬಿಂಗ್ ಮಾಡಿಕೊಡುತ್ತೇವೆ. ಅದರಿಂದ ನೀವು ಹೆಚ್ಚಿನ ಜನರನ್ನು ತಲುಪಿ, ನಿಮ್ಮ ಮಾರುಕಟ್ಟೆಯ ಹರಿವು ಹಿಗ್ಗುವುದು.
ಡಬ್ಬಿಂಗ್, ಮಿಕ್ಸಿಂಗ್ ಅಥವಾ ಮರು-ರೆಕಾರ್ಡಿಂಗ್, ಇವೆಲ್ಲಾ ಸಿನೆಮಾ ಮತ್ತು ವಿಡಿಯೋ ತಯಾರಿಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಾಗಿದ್ದು, ಈ ಸಮಯದಲ್ಲಿ ಚಿತ್ರೀಕರಣದ ವೇಳೆ ರೆಕಾರ್ಡಿಂಗ್ ಮಾಡಿದ ಮೂಲ ದನಿಯೊಂದಿಗೆ ಹೆಚ್ಚುವರಿಯಾಗಿ ರೆಕಾರ್ಡಿಂಗ್ ಮಾಡಿದ ಭಾಷೆಯನ್ನು ಸೇರಿಸಿ ಸೌಂಡ್‌ಟ್ರ್ಯಾಕನ್ನು ಪೂರ್ಣಗೊಳಿಸಲಾಗುತ್ತದೆ. ಹಾಗಾಗಿ, ಇಂಗ್ಲಿಶ್ ಸಿನೆಮಾವೊಂದರಲ್ಲಿನ ಇಂಗ್ಲಿಶ್ ಸಂಭಾಷಣೆಗಳಿಗೆ ಕನ್ನಡದ ಮಾತುಗಳನ್ನು ಕೂರಿಸುವ ಮೂಲಕ ನಟ-ನಟಿಯರು ಕನ್ನಡದಲ್ಲಿ ಮಾತನಾಡುತ್ತಿರುವಂತೆ ಮಾಡಬಹುದು.
ಅಳವಡಿಸುವುದು ಮತ್ತು ಪಾತ್ರಗಳನ್ನು ಹೊಂದಿಸುವುದು
ಅನುವಾದ ಮತ್ತು ಡಬ್ ಮಾಡಿದ ಆಡಿಯೋ ರೆಕಾರ್ಡಿಂಗ್‌ನೊಂದಿಗೆ, ನೀವು ಬೇರೆ ಭಾಷೆಯಲ್ಲಿ ಮುಂದಿಡಲು ಹೊರಟಿರುವ ವಿಷಯವು ಹೆಚ್ಚು ಮನೋರಂಜನೀಯವಾಗಿದೆ ಎಂದು ಖಾತ್ರಿ ಪಡಿಸಿಕೊಳ್ಳಲು, ಅಳವಡಿಕೆ ಮತ್ತು ಪಾತ್ರಗಳಿಗೆ ತಕ್ಕನಾದ ದನಿ ಹೊಂದಿಕೆಯನ್ನು ಮಾಡುವುದು ತುಂಬಾ ಮುಖ್ಯವಾದ ಕೆಲಸವಾಗಿವೆ. ಅಳವಡಿಕೆಯು ಮೂಲ ವಸ್ತುವಿನಲ್ಲಿರುವ ವಿಷಯವನ್ನು ಮತ್ತು ಭಾವನೆಯನ್ನು ಯಥಾವತ್ತು ಮತ್ತೊಂದು ಭಾಷೆಯಲ್ಲಿ ಕಟ್ಟಿಕೊಡುವ ಕಲೆಯಾಗಿದೆ. ಸ್ಥಳೀಯ ಮಾತುಗಾರರನ್ನು ಬಳಸಿಕೊಳ್ಳುವ ಮೂಲಕ, ತುಟಿಯ ಚಲನೆಗೆ ಸರಿಯಾಗಿ ಹೊಂದುವಂತೆ ಸ್ಕ್ರಿಪ್ಟನ್ನು ಅಳವಡಿಸಿಕೊಳ್ಳುತ್ತೇವೆ. ಸ್ಥಳೀಯ ಧ್ವನಿಗಳನ್ನು ಮೂಲ ನಟರಿಗೆ ಹೊಂದಿಸುವ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಪಾತ್ರದ ನೈಜತೆಯನ್ನು ಕಾಪಾಡುವಲ್ಲಿ ಪಾತ್ರಗಳ ಹೊಂದಿಕೆ ಮತ್ತೊಂದು ನಿರ್ಣಾಯಕ ಕಾರ್ಯವಾಗಿದೆ. ವಿಷಯ ಮತ್ತು ಪಾತ್ರಕ್ಕೆ ಸೂಕ್ತವಾದ ಹೊಂದಾಣಿಕೆಯನ್ನು ಪಡೆಯಲು ಅನುಭವಿ ನಿರ್ದೇಶಕರು ಒಪ್ಪುವಂತಹ, ಹೆಚ್ಚು ವೈವಿಧ್ಯಮಯ ಧ್ವನಿಗಳಿಗೆ ನಾವು ನಿಯಮಿತವಾಗಿ ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳುತ್ತೇವೆ.
ಕಾರ್ಯಗತಗೊಳಿಸುವಲ್ಲಿ ನಿಖರತೆ
ಡಬ್ಬಿಂಗನ್ನು ಕಾರ್ಯಗತಗೊಳಿಸುವಾಗ, ಮೊದಲು ಮೂಲ ಆಡಿಯೋವನ್ನು ಮತ್ತೊಂದು ಭಾಷೆಯೊಂದಿಗೆ ಬದಲಾಯಿಸಲಾಗುತ್ತದೆ, ಇದು ಮಾತುಗಾರನ ಬಾಯಿಯ ಚಲನೆಯೊಂದಿಗೆ ಸಂಕ್ಷಿಪ್ತವಾಗಿ ಹೊಂದಿಕೆಯಾಗುತ್ತದೆ. ಈ ಸಂದರ್ಭದಲ್ಲಿ ಪದದ ಆಯ್ಕೆಯು ಬಹಳ ಮುಖ್ಯವಾಗಿದೆ ಏಕೆಂದರೆ ಮೂಲ ಸ್ಕ್ರಿಪ್ಟ್‌ನ ಅರ್ಥವನ್ನು ಉಳಿಸಿಕೊಂಡು ರೂಪಾಂತರಿಸಿದ, ನಟನ ಬಾಯಿಯ ಚಲನೆಗಳಿಗೆ ಸರಿಹೊಂದುವ ಪದಗಳನ್ನು ಕಂಡುಕೊಳ್ಳಬೇಕು.
ಸೂಕ್ತವಾದ ಪದಗಳು ಮತ್ತು ಪರಿಪೂರ್ಣ ಹೊಂದಾಣಿಕೆ
ಚಲನಚಿತ್ರಗಳು, ಟಿವಿ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳು, ವ್ಯಂಗ್ಯಚಿತ್ರಗಳು, ಆಟಗಳು, ಜಾಹಿರಾತುಗಳು, ಕಾರ್ಪೊರೇಟ್ ವೀಡಿಯೊಗಳು ಮತ್ತು ಇನ್ಫೋಟೈನ್‌ಮೆಂಟ್ ವಿಷಯಗಳಿಗಾಗಿ ನಾವು ಬಹುಭಾಷಾ ಡಬ್ಬಿಂಗ್ ಸೇವೆಗಳನ್ನು ಒದಗಿಸುತ್ತೇವೆ. ಹೆಚ್ಚು ನುರಿತ ಡಬ್ಬಿಂಗ್ ಕಲಾವಿದರೊಂದಿಗೆ, ನಾವು ತುಟಿ ಚಲನೆಗೆ ತಕ್ಕಂತೆ ಪದಗಳು ಮತ್ತು ಉತ್ತಮ ಧ್ವನಿ ಗುಣಮಟ್ಟದ ಭರವಸೆಯನ್ನು ನೀಡುತ್ತೇವೆ. ನಮ್ಮ ಸಂಭಾಷಣೆ ಭಾಷಾಂತರಕಾರರು ಬರಹ ರೂಪದ ನುಡಿಗಟ್ಟುಗಳಿಗಿಂತ ಆಡುಮಾತಿನ ಪದಗಳನ್ನು ಬಳಸುತ್ತಾರೆ. ತುಟಿ ಚಲನೆಗೆ ಹೊಂದಿಕೆಯಾಗುವಂತೆ ಪದಗಳ ಉತ್ತಮ ಆಯ್ಕೆಯನ್ನು ಪಡೆಯಲು ನಾವು, ಸಾಹಿತಿಗಳು, ಜಾನಪದ ಬರಹಗಾರರು, ಶಿಕ್ಷಕರು, ಪ್ರತಿಭಾನ್ವಿತ ಚಲನಚಿತ್ರ ಬರಹಗಾರರು ಹಾಗೂ ವಿವಿಧ ನಿಘಂಟುಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿರುವ ಭಾಷಾಶಾಸ್ತ್ರಜ್ಞರೊಂದಿಗೆ ಕೆಲಸ ಮಾಡುತ್ತೇವೆ.
ಉನ್ನತ ಗುಣಮಟ್ಟಕ್ಕಾಗಿ ಸಮರ್ಥವಾದ ಕೆಲಸದ ವಿಧಾನ
ಕ್ಲೈಂಟ್‌ಗಳಿಗೆ ಉತ್ತಮ ಗುಣಮಟ್ಟದ ಡಬ್ಬಿಂಗ್ ಸೇವೆ ಸಿಕ್ಕಬೇಕೆಂಬ ಉದ್ದೇಶಕ್ಕಾಗಿ ನಮ್ಮ ಕೆಲಸದ ವಿಧಾನದಲ್ಲಿ ಪಾರದರ್ಶಕತೆಯನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ. ಮೂಲ ಸ್ಕ್ರಿಪ್ಟ್ ಮತ್ತು ಮೂಲ ವಿಡಿಯೋವನ್ನು ಪಡೆದ ನಂತರ, ಕನ್ನಡ ಭಾಷೆಗೆ ಕಲಾತ್ಮಕವಾಗಿ ಅಳವಡಿಸಲೆಂದು ಭಾಷೆಯ ಮೇಲೆ ಹಿಡಿತವಿರುವ ಪ್ರತಿಭೆಯನ್ನು ನೇಮಿಸಲಾಗುತ್ತದೆ. ರೂಪಾಂತರಗೊಂಡ ಸ್ಕ್ರಿಪ್ಟ್ ಅನ್ನು ಪರಿಶೀಲಿಸಿ, ಒಪ್ಪಿದ ಬಳಿಕ, ಸ್ವರ, ಲಿಂಗ, ವಯಸ್ಸು ಮತ್ತು ದನಿಯ ಏರಿಳಿತದ ಅಗತ್ಯಕ್ಕೆ ಅನುಗುಣವಾಗಿ ನಮ್ಮ ಪ್ರತಿಭೆಗಳ ಕಣಜದಿಂದ ಸೂಕ್ತವಾದ ಡಬ್ಬಿಂಗ್ ಕಲಾವಿದರನ್ನು ನಾವು ಗುರುತಿಸುತ್ತೇವೆ. ಸ್ಕ್ರಿಪ್ಟ್ ಮತ್ತು ಡಬ್ಬಿಂಗ್ ಕಲಾವಿದರ ಆಯ್ಕೆಯ ನಂತರ ವೃತ್ತಿಪರ ನಿರ್ದೇಶನದೊಂದಿಗೆ ಧ್ವನಿಗಳನ್ನು ದಾಖಲಿಸಲಾಗುತ್ತದೆ. ಬಳಿಕ ವಿಡಿಯೋ ಎಡಿಟ್ ಮಾಡಿ, ಡಬ್ ಮಾಡಿದ ಆಡಿಯೋ ಟ್ರ್ಯಾಕ್‌ನೊಂದಿಗೆ ಬೆರೆಸಲಾಗುತ್ತದೆ. ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಇಡೀ ಪ್ರಕ್ರಿಯೆಯಲ್ಲಿ ಅಂತರರಾಷ್ಟ್ರೀಯ ಡಬ್ಬಿಂಗ್ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಫೈಲ್‌ಗಳನ್ನು ಕ್ಲೈಂಟ್‌ಗೆ ಬೇಕಿರುವ ರೂಪದಲ್ಲಿ ನೀಡಲಾಗುವುದು. ಸಮರ್ಥ ಮತ್ತು ಸುಲಭ ಕಾರ್ಯವಿಧಾನವನ್ನು ಅನುಸರಿಸುವುದರಿಂದ ನಮ್ಮ ಗ್ರಾಹಕರಿಗೆ ಉತ್ತಮ ಧ್ವನಿ ಗುಣಮಟ್ಟ ಸಿಗುತ್ತದೆ. ಒಂದು ಮೂಲ ವಿಡಿಯೋ ನಿರ್ಮಾಣದ ಹಿಂದೆ ಬಹಳಷ್ಟು ಜನರ ಪರಿಶ್ರಮ ಅಡಗಿರುವುದು ನಮಗೆ ಅರ್ಥವಾಗುತ್ತದೆ, ಹಾಗಾಗಿ ಡಬ್ಬಿಂಗ್ ಕೆಲಸವನ್ನು ಆ ದುಡಿದ ಕೈಗಳಿಗೆ ಗೌರವ ನೀಡುವಂತೆ ಮಾಡಿಕೊಡುವುದಾಗಿ ಭರವಸೆ ನೀಡುತ್ತೇವೆ.
ಹುಮ್ಮಸ್ಸಿನ ತಂಡ, ಹೊಸ ತಂತ್ರಜ್ಞಾನಗಳು
ಡಬ್ಬಿಂಗ್ ಸೇವೆಗಳನ್ನು ಒದಗಿಸುವುದರಲ್ಲಿ, ಉತ್ತಮ ಗುಣಮಟ್ಟವನ್ನು ನೀಡಲು ಒಳ್ಳೆಯ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಧ್ವನಿಮುದ್ರಣವನ್ನು ಮಾಡಲಾಗುತ್ತದೆ. ದೊಡ್ಡ ಅಥವಾ ಸಣ್ಣದಾದ ಎಲ್ಲಾ ಯೋಜನೆಗಳಿಗೆ ಡಬ್ಬಿಂಗ್ ಸೇವೆಗಳನ್ನು ಒದಗಿಸಲು ನಮಗೆ ಹೆಮ್ಮೆ ಎನಿಸುತ್ತದೆ. ನಮ್ಮ ಡಬ್ಬಿಂಗ್ ನಿರ್ದೇಶಕರು, ಸೌಂಡ್ ಎಂಜಿನಿಯರ್‌ಗಳು, ಬರಹಗಾರರು ಮತ್ತು ಡಬ್ಬಿಂಗ್ ಕಲಾವಿದರು ಎಲ್ಲರೂ ಇತ್ತೀಚಿನ ಡಬ್ಬಿಂಗ್ ತಂತ್ರಜ್ಞಾನಗಳ ಬಗ್ಗೆ ಬಲವಾದ ಜ್ಞಾನ ಹೊಂದಿರುವ ಸ್ಥಳೀಯ ಭಾಷಿಕರಾಗಿದ್ದಾರೆ.