ಹರಿವು
ನಮ್ಮ ಪರಿಚಯ
ಹರಿವು ಕ್ರಿಯೇಷನ್ಸ್ – ಬೇರೆ ಬೇರೆ ವಿಷಯಗಳಲ್ಲಿ ನೈಪುಣ್ಯತೆ ಪಡೆದ ಗುಂಪೊಂದು, ದೃಶ್ಯ ಹಾಗೂ ದನಿ ಮಾಧ್ಯಮದಲ್ಲಿ ಕನ್ನಡ ನೆಲಕ್ಕೊಗ್ಗಿಸುವ (ಲೋಕಲೈಸೇಶನ್) ಕೆಲಸದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕುವುದಕ್ಕಾಗಿ ರೂಪುಗೊಂಡ ಸಂಸ್ಥೆ.
2013ರಲ್ಲಿ ಉತ್ಸಾಹಿ ಹಾಗೂ ದೂರಗಾಮಿ ಯೋಚನೆ ಹೊಂದಿರುವ ಯುವಕರ ತಂಡವು ಪರಭಾಷೆ ಚಿತ್ರವೊಂದನ್ನು ಕನ್ನಡಕ್ಕೆ ಡಬ್ ಮಾಡಿ, ರಾಜ್ಯಾದ್ಯಂತ ಬಿಡುಗಡೆ ಮಾಡಿ, 40 ವರ್ಷಗಳಿಂದ ಮುಚ್ಚಿದ್ದ ಡಬ್ಬಿಂಗ್ ಬಾಗಿಲನ್ನು ತೆರೆಯುವುದರ ಮೂಲಕ ಕನ್ನಡ ಚಲನಚಿತ್ರ, ದೃಶ್ಯಮಾಧ್ಯಮದಲ್ಲಿ ಹೊಸ ಶಕೆಯೊಂದಕ್ಕೆ ನಾಂದಿ ಹಾಡಿತು. ಆ ಕೆಲಸದ ಹರಿಕಾರರೇ ಈ ಹರಿವು ತಂಡ!
ನಮ್ಮ ಪ್ರಯಾಣ ಶುರುವಾಗಿದ್ದು, ಚಲನಚಿತ್ರವೊಂದಕ್ಕೆ ಡಬ್ಬಿಂಗ್ ಮಾಡುವುದರ ಮೂಲಕ. ಮುಂದೆ ಸತತವಾಗಿ ನಾಲ್ಕೈದು ಚಿತ್ರಗಳನ್ನು ಮಾಡಿದ್ದು, ಡಬ್ಬಿಂಗ್‌ನ ಪ್ರತಿ ಆಯಾಮದಲ್ಲೂ ಹಿಡಿತವನ್ನು, ಬೇಕಾದ ಕಸುವನ್ನು ಕರಗತ ಮಾಡಿಕೊಳ್ಳಲು ನೆರವಾಯಿತು. ಲೋಕಲೈಸೇಶನ್‌ನ ಒಂದು ಮೈಲಿಗಲ್ಲನ್ನು ಮುಟ್ಟಿದ ಮೇಲೆ, ಡಬ್ಬಿಂಗ್, ಕನ್ನಡ ಅನುವಾದದ ಸೇವೆಗಳನ್ನು ನೀಡುತ್ತಾ, ಲೋಕಲೈಸೇಶನ್ ಕೆಲಸವನ್ನು ಮಾಡುತ್ತಾ ಸಾಗಿದ್ದೇವೆ. ಕನ್ನಡದ ಸುತ್ತ ಇರುವ ನುಡಿ ಸೇವೆಗಳನ್ನು ನೀಡುತ್ತಿದ್ದೇವೆ. ಈ ನಮ್ಮ ಯಾನದಲ್ಲಿ ನಮ್ಮ ಜೊತೆಗಿದ್ದಿದ್ದು, ನಾಡಿನಾದ್ಯಂತ ಇರುವ ಭಾಷಾತಜ್ಞರು, ಸಾಹಿತ್ಯದ ಪ್ರತಿಭೆಗಳು ಮತ್ತು ನುರಿತ ದನಿ ಕಲಾವಿದರು. ಗುಣಮಟ್ಟದ ಲೋಕಲೈಸೇಶನ್ ಸೇವೆಗಳನ್ನು ಕೊಡುವುದೊಂದೇ ನಮ್ಮ ಗೆಲುವಿನ ಅಳತೆಗೋಲು ಎಂದು ನಂಬಿ ನಡೆಯುತ್ತಿರುವ ಸಂಸ್ಥೆ ನಮ್ಮದು.
ಅರಿವು, ಮನರಂಜನೆ ಎಂಬುದು ಒಂದು ನುಡಿಯಿಂದ ಮತ್ತೊಂದು ನುಡಿಗೆ ಯಾವುದೇ ಅಡೆತಡೆ ಇಲ್ಲದೇ, ಕಲಾತ್ಮಕವಾಗಿ ನೀರಿನಂತೆ ಹರಿಯಬೇಕು. ಆ ಹರಿವಿಗೆ ಬೇಕಾದ ಎಲ್ಲಾ ಕಸುವುಗಳನ್ನು ಒಳ್ಳೆಯ ರೀತಿಯಲ್ಲಿ ಕೊಡಲು ನಾವು ಕಟಿಬದ್ಧರಾಗಿರಬೇಕು ಎನ್ನುವುದೇ ನಮ್ಮ ಗುರಿ.