2020 ರಲ್ಲಿ ಆರಂಭವಾದ ‘ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿ, ಜೀ಼ ಕನ್ನಡದಲ್ಲಿ ಪ್ರಸಾರಗೊಂಡು ಅಪಾರವಾದ ಜನಮನ್ನಣೆ ಗಳಿಸಿತು. ಕರ್ನಾಟಕದ ಮೂಲೆಮೂಲೆಗಳಿಂದಲೂ ಈ ಧಾರಾವಾಹಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತು. ಈ ಸಾಧನೆಯನ್ನು ಗುರುತಿಸಿದ ಜೀ಼ ಕನ್ನಡ ವಾಹಿನಿಯು, 2020 ರ ಸಾಲಿನ ಅತ್ಯುತ್ತಮ ಡಬ್ಬಿಂಗ್ ಧಾರಾವಾಹಿ ಮಹಾನಾಯಕ ಎಂದು ಘೋಷಿಸಿತು. ಬೆಂಗಳೂರಿನಲ್ಲಿ ನಡೆದ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ, ಧಾರಾವಾಹಿಯನ್ನು ನಿರ್ಮಿಸಿದ ಹರಿವು ಕ್ರಿಯೇಷನ್ಸ್ ಸಂಸ್ಥೆ ಈ ಪ್ರಶಸ್ತಿಯನ್ನು ಪಡೆದು, ತನ್ನ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿತು. ಇಂತಹ ಸದಭಿರುಚಿಯ, ಒಳ್ಳೆಯ ಗುಣಮಟ್ಟದ ಧಾರಾವಾಹಿಯನ್ನು ನೋಡುಗರಿಗೆ ನೀಡಲು, ದುಡಿದ ಎಲ್ಲ ದನಿ ಕಲಾವಿದರು ಮತ್ತು ತಂತ್ರಜ್ಞರಿಗೂ ಹಾಗೂ ಇಂತಹ ಅರ್ಥಪೂರ್ಣ ಧಾರಾವಾಹಿಯನ್ನು ಕನ್ನಡಕ್ಕೆ ತರಲು ಮನಸ್ಸು ಮಾಡಿದ ಜೀ಼ ಕನ್ನಡ ವಾಹಿನಿಯ ಮುಖ್ಯಸ್ಥರಿಗೂ ಹರಿವು ಕ್ರಿಯೇಷನ್ಸ್ ಕೃತಜ್ಞತೆ ಸಲ್ಲಿಸಿದೆ.