ಇವತ್ತಿನ ಡಿಜಿಟಲ್ ಜಗತ್ತಿನ ತುಂಬಾ ವಿಡಿಯೋಗಳೇ ಸದ್ದು ಮಾಡುತ್ತಿರುವ ಕಾರಣ, ಹಲವಾರು ಉದ್ದಿಮೆಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ದೇಶ-ಭಾಷೆಗಳ ಗಡಿಯನ್ನು ಮೀರಿ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು, ಜನರಿಗೆ ಅವರವರ ತಾಯಿನುಡಿಯಲ್ಲೇ ವಿಷಯ ಮುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೇ ಲೋಕಲೈಸೇಶನ್ (ಸ್ಥಳೀಕರಣ) ಎನ್ನುತ್ತಾರೆ. ಭಾರತೀಯ ಲೋಕಲೈಸೇಶನ್ ಮಾರುಕಟ್ಟೆಯು 2025ರ ವೇಳೆಗೆ ಬರೋಬ್ಬರಿ 100 ಕೋಟಿ ಮೌಲ್ಯದ ಉದ್ದಿಮೆಯಾಗಿ ಬೆಳೆಯಲಿದೆ ಎಂದು ಖ್ಯಾತ ಹಣಕಾಸು ವಿಶ್ಲೇಷಣೆ ಸಂಸ್ಥೆ ‘ಕೆ.ಪಿ.ಎಂ.ಜಿ’ ಯ ವರದಿ ಹೇಳುತ್ತದೆ. ಈ ಮಾರುಕಟ್ಟೆಯ ಪ್ರಮುಖ ಭಾಗವಾದ ಕನ್ನಡ ಲೋಕಲೈಸೇಶನ್ ಹೇರಳ ಅವಕಾಶಗಳ ಗಣಿಯಾಗಿದ್ದು, ಲಕ್ಷಾಂತರ ಕನ್ನಡಿಗರು ತಮ್ಮ ತಾಯ್ನುಡಿಯಲ್ಲೇ ಡಿಜಿಟಲ್ ಮಾರ್ಕೆಟಿಂಗ್, ಇ-ಕಾಮರ್ಸ್, ಮನರಂಜನೆ, ಸಾಫ್ಟ್‌ವೇರ್ ಹಾಗೂ ಮೊಬೈಲ್ ತಂತ್ರಾಂಶಗಳಿಗೆ ಸಂಬಂಧಿಸಿದ ಕಂಟೆಂಟ್ ಪಡೆಯಲು ಹೆಚ್ಚು ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದೆ.

ಆದರೆ, ವಿಡಿಯೋ ಲೋಕಲೈಸೇಶನ್ ಅಷ್ಟು ಸರಳ ಕೆಲಸವಲ್ಲ. ಒಂದು ವಿಡಿಯೋವನ್ನು ಅದರ ಮೂಲ ಭಾಷೆಯಿಂದ ಬೇಕಾದ ಭಾಷೆಗೆ ಅನುವಾದ ಮಾಡುವುದರಿಂದ ಶುರುವಾಗಿ, ಅದರ ಡಬ್ಬಿಂಗ್, ಡಬ್ ಮಾಡಿದ ಆಡಿಯೋವನ್ನು ಮೂಲ ವಿಡಿಯೋಗೆ ಸೇರಿಸಲು ಎಡಿಟಿಂಗ್, ನೋಡುಗರ ಅನುಕೂಲಕ್ಕಾಗಿ ಅದರ ಸಬ್‌ಟೈಟಲಿಂಗ್, ಹೀಗೆ ಹಲವಾರು ಹಂತಗಳನ್ನು ವಿಡಿಯೋ ಲೋಕಲೈಸೇಶನ್ ಒಳಗೊಂಡಿದೆ. ಇವುಗಳ ಪೈಕಿ, ವಿಡಿಯೋದ ಅನುವಾದ ಈ ಇಡೀ ಪ್ರಕ್ರಿಯೆಯ ತಳಪಾಯ ಎಂದೇ ಹೇಳಬೇಕು. ಏಕೆಂದರೆ ಇದು ಗದ್ಯದ ಅನುವಾದಕ್ಕಿಂತ ತೀರಾ ವಿಭಿನ್ನವಾಗಿದ್ದು, ವಿಡಿಯೋ ಸಂಭಾಷಣೆಯ ಅನುವಾದದ ಜೊತೆಗೆ, ಅದನ್ನು ನಮ್ಮ ಸೊಗಡು-ಸಂಸ್ಕೃತಿಗೆ ಅಳವಡಿಸಿಕೊಳ್ಳುವುದೂ ಸಹ ಬಹಳ ಮುಖ್ಯವಾಗುತ್ತದೆ. ಜೊತೆಗೆ, ನೋಡುಗರಿಗೆ ಇಷ್ಟವಾಗುವ ರೀತಿಯಲ್ಲಿ ಲಿಪ್ ಸಿಂಕ್, ಸಂಭಾಷಣೆ ಹಾಗೂ ಸಬ್‌ಟೈಟಲ್ ಗುಣಮಟ್ಟ ಕಾಪಾಡಿಕೊಳ್ಳುವುದೂ ಬಹಳ ಮುಖ್ಯ.

ಹಾಗಾಗಿ, ಈ ಅಂಶಗಳ ಬಗ್ಗೆ ಅನುವಾದಕರಿಗೆ ಸೂಕ್ತ ತರಬೇತಿ ನೀಡಿ, ಅನುವಾದದ ತಾಂತ್ರಿಕ ಮತ್ತು ಸೃಜನಶೀಲ ಕೌಶಲ್ಯಗಳನ್ನು ಮನದಟ್ಟು ಮಾಡಿಸಬೇಕಿದೆ. ಇದು ವಿಡಿಯೋ ಅನುವಾದದ ಬಗ್ಗೆ ಆಳವಾದ ತಿಳುವಳಿಕೆ ನೀಡುವ ಜೊತೆಗೆ, ಲೋಕಲೈಸೇಶನ್ ಉದ್ದಿಮೆಗೆ ಬೇಕಾದ ತಾಂತ್ರಿಕ ಪರಿಣತಿಯನ್ನೂ ಒದಗಿಸುತ್ತದೆ. ಹಲವಾರು ಭಾಷೆಗಳ ಲೋಕಲೈಸೇಶನ್ ಸಂಸ್ಥೆಗಳು ಇದರ ಮಹತ್ವವನ್ನು ಅರ್ಥ ಮಾಡಿಕೊಂಡು, ತಮ್ಮತಮ್ಮ ಭಾಷೆಗಳ ವಿಡಿಯೋ ಲೋಕಲೈಸೇಶನ್ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ಅದೇ ರೀತಿ ಕನ್ನಡ ಲೋಕಲೈಸೇಶನ್‌ ವಲಯದಲ್ಲೂ ಅಗಾಧ ಬದಲಾವಣೆಗಳನ್ನು ಮಾಡಬೇಕಿದೆ. ಕನ್ನಡದ ಮಟ್ಟಿಗೆ ಭಾರೀ ಪ್ರಮಾಣದ ವಿಡಿಯೋ ಲೋಕಲೈಸೇಶನ್ ತೀರಾ ಹೊಸ ವಿದ್ಯಮಾನವಾಗಿರುವ ಕಾರಣ, ಪುಸ್ತಕಗಳು ಅಥವಾ ಕಥೆ-ಕಾದಂಬರಿಗಳ ಅನುವಾದಕ್ಕೆ ಬೇಕಾಗುವ ಕೌಶಲ್ಯಗಳೇ ವಿಡಿಯೋ ಅನುವಾದಕ್ಕೂ ಸಾಕಾಗುತ್ತವೆ ಎಂಬ ಮನೋಭಾವ ಅನುವಾದಿಸಿದ ವಿಡಿಯೋಗಳಲ್ಲಿ ಎದ್ದು ಕಾಣುತ್ತಿದೆ.

ನಮ್ಮ ಹರಿವು ಕ್ರಿಯೇಶನ್ಸ್‌ ತಂಡ ಈ ಪ್ರವೃತ್ತಿಯನ್ನು ಬಹಳ ಕುತೂಹಲ ಹಾಗೂ ಕಳಕಳಿಯಿಂದ ಗಮನಿಸುತ್ತಾ ಬಂದಿದೆ. 1000 ಕ್ಕೂ ಹೆಚ್ಚು ಗಂಟೆಗಳ ವಿಡಿಯೋ ಲೋಕಲೈಸೇಶನ್, ಸರಿಸುಮಾರು 10000000 ಪದಗಳ ಅನುವಾದ ಹಾಗೂ ಮನರಂಜನೆ, ಕೃಷಿ, ವೈದ್ಯಕೀಯ, ಶಿಕ್ಷಣ, ಕಾನೂನು, ಔಷಧೀಯ ಕ್ಷೇತ್ರ, ಹಣಕಾಸು ಸೇರಿದಂತೆ ಹತ್ತು ಹಲವು ಕ್ಷೇತ್ರಗಳ ದಿಗ್ಗಜ ಕಂಪನಿಗಳೊಂದಿಗೆ ಕೆಲಸ ಮಾಡಿದ ಅನುಭವದಿಂದಾಗಿ, ಕನ್ನಡ ಲೋಕಲೈಸೇಶನ್ ಇಂದು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ನಿಖರವಾಗಿ ಗುರುತಿಸುವ ಹಾಗೂ ಅವುಗಳಿಗೆ ತಕ್ಕನಾದ ಪರಿಹಾರ ಹುಡುಕಬಲ್ಲ ಸಾಮರ್ಥ್ಯ ನಮಗೆ ಒಲಿದಿದೆ.

ಹಾಗಾಗಿ, ನಮ್ಮ ಈ ಅನುಭವದ ಜ್ಞಾನವನ್ನು ಆಸಕ್ತ ಅನುವಾದಕರ ಜೊತೆ ಹಂಚಿಕೊಂಡು ಕನ್ನಡ ಕಸ್ತೂರಿಯ ಘಮವನ್ನು ಇನ್ನಷ್ಟು ಹಬ್ಬಿಸಲು ನೆರವಾಗುವ ಹಂಬಲದಿಂದ, ನಾವು ವಿಡಿಯೋ ಅನುವಾದ ಕಮ್ಮಟಗಳನ್ನು ಆಯೋಜಿಸುತ್ತಿದ್ದೇವೆ. ಉತ್ತಮ ಗುಣಮಟ್ಟದ ಹಾಗೂ ಕನ್ನಡದ ಸೊಗಡಿಗೆ ಒಗ್ಗುವ ವಿಡಿಯೋ ಅನುವಾದ ಮಾಡಲು ಬಯಸುವವರಿಗೆ ಇದೊಂದು ಚಿನ್ನದಂಥ ಚಾನ್ಸು. ಈ ಕಮ್ಮಟದಲ್ಲಿ ನೀವು ಅತ್ಯಾಧುನಿಕ ಅನುವಾದ ತಂತ್ರಜ್ಞಾನಗಳು ಹಾಗೂ ಕೌಶಲ್ಯಗಳನ್ನು ಕಲಿಯುವ ಜೊತೆಗೆ, ಒಂದು ಸಣ್ಣ ವಿಡಿಯೋವನ್ನು ಕೈಯಾರೆ ಅನುವಾದಿಸಬಹುದು ಹಾಗೂ ನೀವು ಪೋಣಿಸಿದ ಪದಗಳಿಗೆ ಸ್ಟುಡಿಯೋದಲ್ಲಿ ಜೀವ ತುಂಬಬಹುದು.

ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡುವ ಆಸೆಯಿದೆಯೇ? ಹಾಗಾದರೆ ಇಂದೇ ರಿಜಿಸ್ಟರ್ ಆಗಿ!

ನಮ್ಮ ಮುಂದಿನ ಅನುವಾದ ಕಮ್ಮಟ ಇದೇ ಫೆಬ್ರವರಿ 24 ಮತ್ತು 25 ರಂದು ನಡೆಯಲಿದೆ. ಈ ಲಿಂಕ್ ಒತ್ತುವ ಮೂಲಕ ನೀವೂ ಇದರಲ್ಲಿ ಪಾಲ್ಗೊಳ್ಳಬಹುದು.